Ads Area

Mankuthimmana kagga (ಮಂಕುತಿಮ್ಮನ ಕಗ್ಗ ) with meanings 110-120

0

 ರಸಧಾರೆ - 111

ಜಡವೆಂಬುದೇನು?ಸೃಷ್ಟಿಯಲಿ ಚೇತನ

ಅಡಗಿ ನಿದ್ರಿಪುದಲ್ಲಿ ಚೈತನ್ಯದಗ್ನಿ ||

ಮಿಡಿಯೆ ಪರಸತ್ವವಿದ್ಯುದ್ದೀಪ್ತಿಯದನಾಗ |

ನಡೆವುದದು ಜೀವಿವೊಲು – ಮಂಕುತಿಮ್ಮ ||

ಜಡವೆಂಬುದೇನು = ಜಡವು + ಎಂಬುದು + ಅದು + ಏನು | ನಿದ್ರಿಪುದಲ್ಲಿ = ನಿದ್ರಿಪುದು + ಅಲ್ಲಿ | ಚೈತನ್ಯದಗ್ನಿ = ಚೈತನ್ಯದ + ಅಗ್ನಿ | ಪರಸತ್ವವಿದ್ಯುದ್ದೀಪ್ತಿಯದನಾಗ = ಪರಸತ್ವ + ವಿದ್ಯುತ್ + ದೀಪ್ತಿ + ಅದನು + ಆಗ | ನಡೆವುದದು = ನಡೆವುದು + ಅದು |

ಸುಪ್ತಿ = ಸುಪ್ತವಾಗಿರುವುದು | ಚೈತನ್ಯದಗ್ನಿ = ಜೀವ ತೇಜಸ್ಸು | ಮಿಡಿಯೆ = ಓಡಾಡಿದರೆ | ಪರಸತ್ವ = ಪರಮಾತ್ಮ ಸತ್ವ | ಜೀವಿವೊಲು = ಜೀವಿಯಂತೆ

ಒಂದೇ ಮೂಲದಿಂದ ಹೊರಟ ಎರಡು ವಸ್ತುಗಳು. ಒಂದು ಜಡ ಇನ್ನೊಂದು ಚೇತನ. ಅದರ ಅಸ್ಥಿತ್ವಕ್ಕೆ ಕಾರಣವೇ ಬೃಹಚ್ಚೇತನ. ಸೃಷ್ಟಿಯ ಆದಿಯಲ್ಲಿ ಆ ಚೇತನದ ವ್ಯಾಪಕತೆಯ ಸ್ವರೂಪವೇ ಬೇರೆ. ಕೋಟ್ಯಾಂತರ ವರ್ಷಗಳಿಂದ ಬದಲಾಗುತ್ತಾ ಬರುತ್ತಿದೆ. ಮೊದಲು ಪಂಚಭೂತಗಳಲ್ಲಿ ಮಾತ್ರ ಇದ್ದದ್ದು ಕಾಲಾನುಕಾಲಕ್ಕೆ ಗಿಡಮರಗಳಲ್ಲಿ ತದನಂತರ ಕ್ರಿಮಿ ಕೀಟಗಳಲ್ಲಿ, ನಂತರ ಪ್ರಾಣಿಗಳಲ್ಲಿ ಹೀಗೆ ಎಲ್ಲದರ ಅಸ್ಥಿತ್ವಕ್ಕೆ ಕಾರಣವಾದ ಚೇತನವು ತನ್ನ ಶರೀರವನ್ನು ರೂಪಾಂತರಗೊಳಿಸುತ್ತಾ ಹೋಯಿತು. ” ಅಕಾಶಾದ್ವಾಯು: ವಾಯೋರಗ್ನಿ: ಅಗ್ನೇರಾಪಃ ಅದ್ಭ್ಯಃ ಪೃಥಿವೀ ಪೃತಿವ್ಯಾ ಓಷದಯಃ ಒಷದೀಭ್ಯೋನ್ನಂ ಅನ್ನಾತ್ ಪುರುಷಃ ” ಹೀಗೆ ಚೇತನವು ತನ್ನ ಇರುವಿಕೆಯನ್ನು ಎಲ್ಲೆಡೆ ತೋರಿಸುತ್ತಾ ಜೀವಗಳಲ್ಲಿ ಚೇತನ ಸ್ವರೂಪದಿಂದ ” ಪುರುಷ” ನೆಂದು ಕರೆಯಲ್ಪಡುತ್ತಾ ಪೌರುಷದಿಂದ ಮೆರೆದಿದೆ.

ಈ ಹಿಂದಿನ ಕಗ್ಗದಲ್ಲಿ ಉಲ್ಲೇಖಿಸಿದಂತೆ “ಜಡ” ವೆಂದರೆ ಚಲನೆ ಇಲ್ಲದ ವಸ್ತು. ಅದರಲ್ಲಿಯೂ ಚೈತನ್ಯವಿದೆ. ಆದರೆ ಆ ಚೈತನ್ಯಾಗ್ನಿ ನಿದ್ರಿಸುತ್ತಿದೆ ಎಂದರೆ ಸುಪ್ತವಾಗಿದೆ. ನಿದ್ರಿಸುತ್ತಿರುವ ಆ ಅಗ್ನಿಯ ಕಿಡಿ ಸಿಡಿದು ಮಿಡುಕಿದರೆ ಅದು ಜೀವಿಯಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಹಾಗೆಯೇ ಪ್ರತಿಜೀವಿಯೂ ಜ್ಞಾನಸ್ವರೂಪನೆ. ಆದರೆ ಆ ಜ್ಞಾನವು ಸುಪ್ತವಾಗಿದೆ. ಜ್ಞಾನದ ಕನ್ನಡಿಯ ಮೇಲೆ ಧೂಳಿನ ಪೊರೆ ಕವಿದಿದೆ. ಅದನ್ನು ಒರೆಸಿ ಶುದ್ಧಿಮಾಡಿದರೆ, ಕನ್ನಡಿಯು ಫಳ ಫಳನೇ ಹೊಳೆದು ಜ್ಞಾನ ಅಂದರೆ ಬೆಳಕನ್ನು ಹೊರಸೂಸುತ್ತದೆ. ಜ್ಞಾನ ಕವಿದಿರುವ ತನಕ ಜಡವಾಗಿದ್ದು, ಶುದ್ಧವಾದೊಡನೆ, ಚೈತನ್ಯದಿಂದ ಕೂಡಿದಂತಾಗುತ್ತದೆ. ಇದನ್ನೇ ಮಾನ್ಯ ಗುಂಡಪ್ಪನವರು “ಪರಸತ್ವವಿದ್ಯುದ್ದೀಪ್ತಿಯದನಾಗ” “ನಡೆವುದದು ಜೀವಿವೊಲು ” ಎಂದಿದ್ದಾರೆ. ಜ್ಞಾನದ ಸಂಸಂರ್ಗದಿಂದ ಜಡವಾಗಿರುವ ನಮ್ಮ ಜೀವನವು ಚೈತನ್ಯದಾಯಕವಾಗುತ್ತದೆ ಎನ್ನುವುದೇ ಈ ಕಗ್ಗದ ಹೂರಣ.

ವಾಚಕರೆ ನಾವೂ ಸಹ ನಮ್ಮ ಕನ್ನಡಿಗಳನ್ನು ಒರೆಸಿ ಶುದ್ಧಿಮಾಡಿಕೊಳ್ಳಬೇಕು. ನಾವೂ ಸಹ ಚೈತನ್ಯಪೂರಿತರಾಗಿ ಪ್ರಜ್ವಲಿಸಬೇಕು. ಅಂತಹ ಪ್ರಯತ್ನವನ್ನು ನಾವು ಮಾಡೋಣವೆ?

ರಸಧಾರೆ - 112

ಹಿಮಗಿರಿಯೊಳವಿತಿಹುದು ಚೈತನ್ಯದಗ್ನಿ ಕಣ |

ಸ್ಥಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ ||

ಶಮದ ಸುಂದರದ, ಸಾತ್ವಿಕದ ಗಾಂಭೀರ್ಯವದು |

ನಮಗೊಂದು ವೇದ ನಿಧಿ – ಮಂಕುತಿಮ್ಮ.||

ಹಿಮಗಿರಿಯೊಳವಿತಿಹುದು = ಹಿಮಗಿರಿಯೊಳು + ಅವಿತಿಹುದು | ಚೈತನ್ಯದಗ್ನಿ = ಚೈತಯದ ಅಗ್ನಿ | ನಿಂತಿರ್ಪುದದು = ನಿಂತಿರುವುದು + ಅದು | ಗಾಂಭೀರ್ಯವದು = ಗಾಂಭೀರ್ಯವು + ಅದು

ಬೃಹತ್ತಾದ ಹಿಮಾಲಯ ಪರ್ವತದ ಗರ್ಭದಲ್ಲೂ ಸಹ ಒಂದು ಚೈತನ್ಯದ ಅಗ್ನಿ ಅಡಗಿದೆ. ಅದು ಸ್ಥಿರವಾಗಿ, ಸ್ಥಿಮಿತದಿಂದ, ನಿಂತಿದೆ. ಈ ಭೂಮಿಯನ್ನು ಕಾಪಾಡುವುದಕ್ಕಾಗಿಯೇ!! ಶಾಂತ, ಸುಂದರ ಮತ್ತು ಸಾತ್ವಿಕ ಗಾಂಭೀರ್ಯದ ನಿಲುವಿನಲ್ಲಿ ನಿಂತಿರುವ ಆ ಹಿಮಾಲಯವು ನಮಗೆ ಜ್ಞಾನದ ಪ್ರತೀಕವಾಗಿದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಆದರೆ ಆ ಚೈತನ್ಯದ ಅಗ್ನಿ ಸುಪ್ತವಾಗಿದೆ. ತಿಬ್ಬೆಟ್ಟಿನ ಆ ಭಾಗದಲ್ಲಿ ಒಂದೆರಡು ಅಗ್ನಿಪರ್ವತಗಳಿರಬಹುದು. ಆದರೆ ಒಂದು ನೂರು ವರ್ಷಗಳಿಂದ ಅದು ಸಿಡಿದ ದಾಖಲೆಯಿಲ್ಲ. ಅಂದರೆ ಸುಪ್ತವಾಗಿದೆ. ಅದು ಸುಪ್ತವಾಗಿರುವುದರಿಂದ, ಭೂಮಿಯ ಈ ಭೂ ಬಾಗ ಸ್ವಸ್ಥವಾಗಿದೆ, ಎನ್ನುವುದೂ ಸತ್ಯ.

ಹಿಮಾಲಯ ಒಬ್ಬ ಜ್ಞಾನಿ ಸ್ಥಿತಪ್ರಜ್ಞನಂತೆ, ಧೀಮಂತನಂತೆ ನಿಂತಿದೆ. ಅದು ಶಾಂತವಾಗಿದೆ. ಅದನ್ನು ಕಂಡವರಿಗೂ ಮನಸ್ಸಿನಲ್ಲಿ ಶಾಂತಿಯಡರಿ ಮನಸ್ಸು ಪ್ರಶಾಂತವಾಗುತ್ತದೆ. ಅದರ ಸೌಂದರ್ಯವನ್ನು ಬಣ್ಣಿಸಲಸಾಧ್ಯ. ಗಾಂಭೀರ್ಯವೇ ಮೂರ್ತವೆತ್ತಂತೆ ನಿಂತಿದೆ. ಅದು ದೇವತೆಗಳ ವಾಸಸ್ಥಾನ. ಹಿಮಾಲಯವನ್ನು ವರ್ಣಿಸಿದ ಕಾವ್ಯಗಳು, ಪುರಾಣಗಳು, ನಮ್ಮಲ್ಲಿ ವಿಫುಲ. ಪರಶಿವನ ಆವಾಸ ಸ್ಥಾನ. ಎಲ್ಲ ದೇವತೆಗಳ, ಯಕ್ಷರ, ಕಿನ್ನರರ, ಕಿಂಪುರುಷರ ವಾಸದ ಮನೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿರುವ ಎಲ್ಲ ಋಷಿ ಮುನಿಗಳ ತಪೋಧ್ಯಾನ. ಎಲ್ಲ ಋಷಿ ಮುನಿಗಳಿಗೂ ತಪಸ್ಸಿಗೆ ಸೂಕ್ತ ತಾಣ ಹಿಮಾಲಯ. ಅವರಲ್ಲಿ, ವಸಿಷ್ಠ, ಗೌತಮ, ವಿಶ್ವಾಮಿತ್ರ, ಮುಂತಾದವರು ಪ್ರಮುಖರು. ಹಿಮಾಲಯವು ನಮ್ಮ ಭಾರತೀಯ ವೇದ ಸಂಸ್ಕೃತಿಯ ಉಗಮಸ್ಥಾನ. ಭಾರತೀಯ ಸಂಸ್ಕೃತಿಯ ಜ್ಞಾನದ ಅಗ್ನಿಗೆ ನಮ್ಮ ಹಿಮಾಲಯವೇ ಮೂಲವೆಂದರೆ ತಪ್ಪಾಗಲಾರದು. ಹಿಮಾಲಯವನ್ನು ಬಣ್ಣಿಸಲು ಹೋದರೆ ನಮ್ಮ ಪದಗಳು ಪೇಲವಗೊಂಡಾವು.

ನಮ್ಮಲ್ಲೂ ಅಂತಹ ಹಿಮಾಲಯ ಸದೃಶರಾದ ಜ್ಞಾನಿಗಳು ಇದ್ದಾರೆ. ಸತ್ಯ ಸ್ವರೂಪದ ಜ್ಞಾನಿಗಳು. ಜ್ಞಾನಾಗ್ನಿ ಕುಂಡಗಳಂತೆ, ಜ್ಞಾನದ ಬೆಳಕು ಅವರಲ್ಲಿ ತುಂಬಿದ್ದರೂ ತುಳುಕದೆ, “ಸ್ಥಿಮಿತದಿಂ ನಿಂತಿರ್ಪುದದು ಧರೆಯ ಹಿತಕೆ” ಎಂಬಂತೆ, ಸ್ಥಿಮಿತದಿಂದ ಶಾಂತವಾಗಿ, ಗಂಭೀರವಾಗಿ, ಜ್ಞಾನ ಸ್ವರೂಪರಾಗಿ ನಮ್ಮ ಸುತ್ತು ಮುತ್ತಲಿನ ಸಮಾಜದಲ್ಲಿ ಇದ್ದಾರೆ. ಶುದ್ಧ ಕುತೂಹಲದಿಂದ, ಜ್ಞಾನ ಪಿಪಾಸುಗಳಿಗೆ, ಅವರು ಸತ್ಯವಾಗಲೂ ” ವೇದ ನಿಧಿ” ಗಳಂತೆ ಇದ್ದಾರೆ. ಅಂತಹವರು ಸಿಕ್ಕರೆ ಅವರಿಂದ ಜ್ಞಾನ ಪಡೆಯುವ ಪ್ರಯತ್ನ ಮಾಡಬೇಕು. ಹಿಮಾಲಯ ಸದೃಶರಾದ ಅವರ ಕಾಲಿಗೆರಗಿ, ನಮಸ್ಕರಿಸಿ, ಜಿಜ್ಞಾಸೆಯಿಂದ, ಅವರಿಂದ ಜ್ಞಾನ ಪಡೆಯುವ ಪ್ರಯತ್ನ ಮಾಡಬೇಕು. ಅವರಿಂದ ಸಿಡಿಯುವ ಜ್ಞಾನಾಗ್ನಿ ಕಿಡಿಗಳನ್ನು ಗ್ರಹಿಸಿ, ನಮ್ಮ ಮನಸ್ಸು, ಬುದ್ಧಿಗಳನ್ನು ಪ್ರಜ್ವಲಿಸಿಕೊಳ್ಳಬೇಕು. ಅಂತಹ ಜ್ಞಾನಿಗಳು ಹಿಮಾಲಯ ಸದೃಶರಾಗಿರುವುದರಿಂದಲೇ, ಇಂದಿಗೂ ಸಮಾಜದಲ್ಲಿ ಹಲ ಕೆಲವರಾದರೂ

ಸಜ್ಜನರಾಗಿ ರೂಪುಗೊಳ್ಳುತ್ತಿದ್ದಾರೆ. ಇಂತಹ ಜ್ಞಾನಿಗಳು, ಹಿಮಾಲಯವು ಈ ಭೂ ಭಾಗಕ್ಕೆ ಎಷ್ಟು ಹಿತವನ್ನುಂಟುಮಾಡುತ್ತಿದೆಯೋ, ಅಷ್ಟೇ ಹಿತವನ್ನು ಈ ಸಮಾಜಕ್ಕೆ ಮಾಡುತ್ತಿದ್ದಾರೆ. ಆದರೆ ವಿಪರ್ಯಾಸವೆಂದರೆ, ಇಂದು ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅಂತಹವರ ಅಭಿಪ್ರಾಯಗಳಿಗೆ ಬೆಲೆಯಿಲ್ಲದೆ, ನಮ್ಮ ಸಮಾಜ ಅಧೋಗತಿಯ ಮಾರ್ಗವನ್ನು ತುಳಿಯುತ್ತಿದೆ.

ಎಂದು ಅಂತಹ ಜ್ಞಾನಿಗಳ, ಧರ್ಮಾಧಾರಿತ ವಿವೇಕವನ್ನು ಸಮಾಜ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳುತ್ತದೋ, ಅಂದು ನಮಗೆಲ್ಲಾ ಒಳಿತು. ಅಂತಹಾ ಸುದಿನ ಬರಲೆಂದು ಆಶಿಸುತ್ತಾ.

ರಸಧಾರೆ - 113

ಅಣುಸಂಖ್ಯೆಯೆಣಿಸುವನು ವಿಶ್ವದಲಿ ವಿಜ್ಞಾನಿ |

ಗುಣಿಸುವನು ಭೂತಶಕ್ತಿಗಳನದರಿಂದೇಂ ||

ಗಣಿತಸಾಧ್ಯದ ಹಿಂದಗಣ್ಯದ ಮಹತತ್ವ |

ವಣಗಿಹುದು ಮೂಲವದು – ಮಂಕುತಿಮ್ಮ||

ಅಣುಸಂಖ್ಯೆಯೆಣಿಸುವನು = ಅಣುಸಂಖ್ಯೆಯನು + ಎಣಿಸುವನು | ಭೂತಶಕ್ತಿಗಳನದರಿಂದೇಂ = ಭೂತ + ಶಕ್ತಿಗಳನು + ಅದರಿಂದ + ಏನು| ಗಣಿತಸಾಧ್ಯದ = ಗಣಿತ + ಸಾಧ್ಯದ | ಹಿಂದಗಣ್ಯದ = ಹಿಂದೆ + ಅಗಣ್ಯದ | ಮಹತತ್ವವಣಗಿಹುದು = ಮಹತತ್ವವವು + ಅನಗಿಹುದು | ಮೂಲವದು = ಮೂಲವು + ಅದು.

ಈ ಜಗತ್ತಿನ ಅತಿ ಸೂಕ್ಷ್ಮ ಜೀವಿ ಅಣುಗಳನ್ನು ವಿಜ್ಞಾನಿ ಲೆಕ್ಕ ಹಾಕಿಬಿಡಬಹುದು. ಭೌತಿಕ ಶಕ್ತಿಯನ್ನು ಗುಣಿಸಿ ಭಾಗಿಸಿ ಲೆಕ್ಕಹಾಕಿಬಿಡಬಹುದು. ಆದರೆ ಅದರಿಂದ ಏನು ಪ್ರಯೋಜನ. ಕೇವಲ ಭೌತಿಕ ರೂಪವಷ್ಟೇ ತಿಳಿಯುವುದು. ಈ ಗಣಿತ ಶಾಸ್ತ್ರಕ್ಕೂ ಮೀರಿ ಒಂದು ಮಹತತ್ವವು ಭೌತಿಕ ಶರೀರದೊಳಗೆ ಚೈತನ್ಯ ರೂಪದಲಿ ಅಡಗಿದೆ. ಅದೇ ಮೂಲ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ವಿಜ್ಞಾನಿಗಳ ವೈಜ್ಞಾನಿಕ ಪ್ರಯೋಗಗಳ, ಅವುಗಳ ಫಲಿತಾಂಶಗಳ ಮತ್ತು ಅವುಗಳ ತಾತ್ಕಾಲಿಕತೆಯ ಬಗ್ಗೆ ನಾವು ಬಹಳಷ್ಟು ಓದಿದ್ದೇವೆ ಮತ್ತು ಬರೆದಿದ್ದೇವೆ. ವಿಜ್ಞಾನಗಳು ಕೇವಲ ಭೌತಿಕ ವಿಷಯಗಳನ್ನಷ್ಟೇ ಲೆಕ್ಕಹಾಕಬಲ್ಲರು. ಆದರೆ ಈ ಭೌತಿಕವನ್ನು ಉಂಟುಮಾಡಿದ, ಸಲುಹುತ್ತಿರುವ ಆ ಮಹಾ ಶಕ್ತಿಯು ಅವರ ಲೆಕ್ಕಗಳ ಹಿಡಿತಕ್ಕೆ ಇನ್ನೂ ಸಿಕ್ಕಿಲ್ಲ ಅಲ್ಲವೇ? ಅದು ಸಿಗುವುದೂ ಇಲ್ಲ. ಪ್ರತಿ ನಿತ್ಯ ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ, ನಮಗೆಲ್ಲ ಒಂದು ವಿಸ್ಮಯವನ್ನು ತೋರುವ ಆ ಶಕ್ತಿ ಲೆಕ್ಕಾಚಾರದ ಹಿಡಿತಕ್ಕೆ ಸಿಕ್ಕಲು ಸಾಧ್ಯವೇ ಇಲ್ಲ.

ಅದು ಪರತತ್ವ, ಪರಮಾತ್ಮ ತತ್ವ ಮತ್ತು ಸತ್ವ. ಭೌತಿಕ ಶರೀರಗಳ ಚಲನೆಗೆ ಇಂಬುಕೊಡುವ ಸತ್ವ. ಅದು ಎಲ್ಲಿದೆ, ಎಲ್ಲಿಂದ ಬರುತ್ತದೆ, ಹೇಗೆ ಕಾರ್ಯಮಾಡುತ್ತದೆ, ಎನ್ನುವುದೇ ಒಂದು ವಿಸ್ಮಯ. ನೋಡಿ ಒಂದು ಬತ್ತದ ಬೀಜ ನೆಟ್ಟರೆ, ಮೊಳೆತು, ಸಸಿಯಾಗಿ, ತೆನೆಯೊಡೆಯುತ್ತದೆ. ಆದರೆ ಆ ತೆನೆಯಾಗಲು ಆ ಬೀಜ ಮತ್ತು ಆ ಸಸಿ, ಸತ್ವವನ್ನು, ಪ್ರಕೃತಿಯಿಂದ ಹೇಗೆ ಸೆಳೆದುಕೊಂಡಿತು ಎನ್ನುವುದು ಒಂದು ವಿಸ್ಮಯ. ಅದೇ ಪರಮಾತ್ವ ತತ್ವ. ಆ ಸಸಿಯ ತೆನೆಯಲ್ಲಿನ ಕಾಳುಗಳನ್ನು ಎಣಿಸಿಬಿಡಬಹುದು. ಆದರೆ ಆ ತೆನೆಯಲ್ಲಿ ಅಷ್ಟೇ ಕಾಳುಗಳು ಹೇಗೆ ಮತ್ತು ಏಕೆ ಆದವು ಎಂದು ವಿಜ್ಞಾನಿಗಳು ಹೇಳಬಲ್ಲರೆ ಅಥವಾ ಒಂದು ಸಸಿಯನ್ನು ನೋಡಿ ಅದರಲ್ಲಿ, ಇಷ್ಟೇ ಕಾಳುಗಳಾಗುವುವು ಎಂದು ವಿಜ್ಞಾನಿಗಳು ಹೇಳಬಲ್ಲರೆ ? ಹಾಗೆ ಹೇಳಲಾಗದಂತ ಶಕ್ತಿಯೇ ಪರಮಾತ್ಮ ಶಕ್ತಿ. ಹೀಗೆಯೇ ” ಭವತಿ ಇತಿ ಭೂತಃ ” ಎಂಬ ಅರ್ಥದಲ್ಲಿ ಈ ಜಗತ್ತಿನಲ್ಲಿರುವ ಎಲ್ಲ ಭೂತಗಳಲ್ಲೂ ಇರುವುದೇ ಆ ಪರಮಾತ್ಮ ಶಕ್ತಿ. ಮಾನವನ ಲೆಕ್ಕಾಚಾರಕ್ಕೆ ಎಟುಕದ್ದು. ಇದು ಕೇವಲ ಅನುಭವವೇಧ್ಯ.

ಅಂತಹ ಅನುಭವಕ್ಕೆ ಮಾತ್ರ ಸಿಗಬಹುದಾದ ಮತ್ತು ಸಕಲ ಜೀವರಾಶಿಗಳ ಸೃಷ್ಟಿ, ಸ್ಥಿತಿ ಮತ್ತು ಲಯಗಳಿಗೆ ಕಾರಣವಾದ, ಚೈತನ್ಯ ಸ್ವರೂಪವಾದ ಆ ಪರಮಾತ್ಮ ಶಕ್ತಿಯೇ ಎಲ್ಲೇ ಜೀವರಾಶಿಗಳಲ್ಲೂ ಇದೆ ಎಂಬುದೇ ಈ ಕಗ್ಗದ ಹೂರಣ.

ರಸಧಾರೆ - 114

ಸೃಷ್ಟಿರೂಪಂಗಳವತಾರದೋಳ್ ಕ್ರಮ ಲಕ್ಷ್ಯ |

ಪುಷ್ಪವಾಗಿರ್ದೊಡೇನಿಲ್ಲ ದೊಡದೇನು ||

ಶಿಷ್ಟಮಾದುದು ಸತ್ವವದನು ಸೋಕದು ರೂಪ |

ದೃಷ್ಟಿ ಸತ್ವದೊಳಿರಲಿ – ಮಂಕುತಿಮ್ಮ ||

ಸೃಷ್ಟಿರೂಪಂಗಳವತಾರದೋಳ್ = ಸೃಷ್ಟಿ+ರೂಪಂಗಳ + ಅವತಾರದೋಳ್ / ಪುಷ್ಪವಾಗಿರ್ದೊಡೇನಿಲ್ಲ ದೊಡದೇ= ಪುಷ್ಪವಾಗಿ + ಇರ್ದೊಡೇನು + ಇಲ್ಲದೊಡೆ + ಅದೇನು / ಶಿಷ್ಟಮಾದುದು = ಶಿಷ್ಟಂ + ಆದುದು / ಸತ್ವವದನು = ಸತ್ವವು ಅದನು / ಸತ್ವದೊಳಿರಲಿ = ಸತ್ವದೊಳು ಇರಲಿ.

ಈ ಜಗತ್ತಿನ ಸೃಷ್ಟಿಯಲ್ಲಿ ಎಲ್ಲವೂ ಆ ಪರಮಾತ್ಮನ ಅವತಾರವೆಂದು ನಾವು ನಂಬಿದ್ದೇವೆ. ಆದರೆ ಇಡೀ ಸೃಷ್ಟಿಯಲ್ಲಿ ಒಂದು ಕ್ರಮವಿದ್ದರೆಷ್ಟು ಅಥವಾ ಇಲ್ಲದಿದ್ದರೆಷ್ಟು. ಹೊರ ರೂಪ ಶಿಷ್ಟವೋ ಅಲ್ಲವೋ ಆದರೆ ಅಂತರ್ಯದಲ್ಲಿರುವ ಆ ಪರಮಾತ್ಮ ತತ್ವವು ಹೊರರೂಪಗಳಿಗೆ ಅತೀತವಾಗಿ ವಿಕಾರಗೊಳ್ಳುವುದಿಲ್ಲ. ಹಾಗಾಗಿ ನಾವು ನಮ್ಮ ದೃಷ್ಟಿಯನ್ನು ಆ ಪರತತ್ವದಲ್ಲಿ ಕೇಂದ್ರೀಕರಿಸಬೇಕು ಎನ್ನುವುದೇ ಈ ಕಗ್ಗದ ಹೂರಣ.

ಒಂದು ಮಹಾ ಶಕ್ತಿ ಕೋಟಿ ಕೋಟಿ ವರ್ಷಗಳ ಹಿಂದೆ ತನ್ನಿಚ್ಚೆಯಂತೆ, ತನ್ನಿಂದಲೇ, ಎಲ್ಲವನ್ನೂ ಆಗ ಮಾಡಿತು. ಅದನ್ನೇ ನಾವು ಪರಮಾತ್ಮ ಶಕ್ತಿಯಂದು ಕರೆಯುತ್ತೇವೆ. ಎರಡಾಗಿ ಪ್ರಕಟವಾಯ್ತು. ಒಂದು ಬಾಹ್ಯ ರೂಪ, ಎರಡು ಅಂತರ್ಯದ ಚೇತನ. ಬಾಹ್ಯ ರೂಪಗಳು ಕೋಟಿ ವಿಧ ಆದರೆ ಅಂತರ್ಯದ ಚೇತನ ಒಂದೇ. ಪ್ರಾಣಿಗಳು, ಪಕ್ಷಿಗಳು, ಕೀಟಗಳು, ಗಿಡಮರಗಳು, ಜಲಚರಗಳು, ಹೀಗೆ ಎಷ್ಟೊಂದು ವಿಧ ಆದರೆ ಅವೆಲ್ಲರ ಅಸ್ತಿತ್ವಕ್ಕೆ ಮತ್ತು ಜೀವನಕ್ಕೆ ಪೂರಕವಾದ ಶಕ್ತಿ ಒಂದೇ. ಅದಕ್ಕೆ ರೂಪವೇ ಇಲ್ಲ. ಅಥವಾ ಎಲ್ಲರೂಪಗಳೂ ಅದೇ ಎಂದರೂ ಸರಿಯಾಗಬಹುದು. ” ಅಂದರಿಲೋ ಪುಟ್ಟಿ ಅಂದರಿಲೋ ಚೇರಿ ಅಂದರಿ ರೂಪಮುಲು ಅಟು ತಾನೈ” ಎಂದು ಅನ್ನಮಾಚಾರ್ಯರ ಹಾಡು. “ಎಲ್ಲರಲ್ಲೂ ಹುಟ್ಟಿ, ಎಲ್ಲರಲ್ಲೂ ಸೇರಿ, ಎಲ್ಲಾರ ರೂಪವೂ ತಾನೇ ಆಗಿ” ಎಂದು. ಎಲ್ಲಕ್ಕೂ ಬಲ ಎಲ್ಲದರಲ್ಲೂ ವ್ಯಾಪಕವಾಗಿರುವವನೆ ಆ ಪರಮಾತ್ಮ ಎಂದು ಕನ್ನಡದ ಆದಿಕವಿ ” ಪುರಂದರ ದಾಸರೂ “ಹೇಳುತ್ತಾರೆ. ಹೊರ ರೂಪಗಳು ಒಂದೇ ಸಮನಾಗಿಲ್ಲದೆ, ಕೆಲವು ಸುಂದರವಾಗಿ, ಕೆಲವು ಕುರೂಪವಾಗಿ, ಕೆಲವು ಅತೀ ಸೂಕ್ಷ್ಮವಾಗಿ, ಕೆಲವು ಬೃಹತ್ತಾಗಿ, ಹೀಗೆ ಸಾವಿರಾರು ವೈವಿಧ್ಯತೆಗಳನ್ನು ಹೊಂದಿದ್ದರೂ ಶಿಷ್ಟವಲ್ಲದೆ ಇದ್ದರೂ ಅಂತರ್ಯದಲ್ಲಿರುವ ಚೇತನ ಶಿಷ್ಟವಾಗಿದೆ ಅದು ಬಾಹ್ಯ ರೂಪದಂತೆ ಬೇಧಹೊಂದುವುದಿಲ್ಲ

ಈ ಜಗತ್ತಿನ ಎಲ್ಲ ಜೀವ ರಾಶಿಗಳ ರೂಪಗಳು ಬೇರೆ ಬೇರೆಯಾದರೂ, ಅವುಗಳು ಜನ್ಮ ತಳೆಯಲು, ಬೆಳೆಯಲು, ಜೀವಿಸಲು ಪೂರಕವಾದ ಶಕ್ತಿಯೇ ಆ ಪರಮಾತ್ಮ ಶಕ್ತಿ. ಅದಿಲ್ಲದಿದ್ದರೆ ಬೇರೆಯಾವುದೂ ಇಲ್ಲ. ನಾವು ನಮ್ಮ ಭೌತಿಕ ಕಣ್ಣುಗಳಿಗೆ ಕಾಣುವ ರೂಪಗಳಿಂದ ವಸ್ತುಗಳ ವೈವಿಧ್ಯತೆಯನ್ನು ನೋಡುತ್ತಿದ್ದೇವೆ, ಭೇದಮಾಡುತ್ತಿದ್ದೇವೆ, ಪ್ರೀತಿಸುತ್ತೇವೆ, ದ್ವೇಷಿಸುತ್ತೇವೆ. ಅಂದರೆ ಈ ಪರಮಾತ್ಮನ ಸೃಷ್ಟಿಯಲ್ಲಿನ ಎಲ್ಲ ವಸ್ತುಗಳ ಪ್ರತಿ ನಮಗಿರುವ ಭಾವಗಳೆಲ್ಲ, ಬಾಹ್ಯ ರೂಪ ಸಂಬಂಧಿಸಿದ್ದು. ಎಲ್ಲದರಲ್ಲೂ ಇರುವುದು ಒಂದೇ ಅಂತಃಶಕ್ತಿಯಂದು ನಾವು ಗುರುತಿಸುವುದೇ ಇಲ್ಲ. ಹಿಂದೆಯೂ ಇದೆ ದೃಷ್ಟಾಂತವನ್ನು ಕೊಟ್ಟಿದ್ದೇನೆ. ಹೇಗೆ ವಿದ್ಯುತ್ ಬಲ್ಬಗಳು, ಬೇರೆ ಬೇರೆ ಆಕಾರ, ಬಣ್ಣದಲ್ಲಿದ್ದರೂ, ಅದು ಪ್ರಕಾಷಿಸಲು ಒಂದೇ ವಿದ್ಯುತ್ತಿನ ಹೇಗೆ ಉಪಯೋಗಿಸಿಕೊಳ್ಳುತ್ತದೋ, ಹಾಗೆಯೇ ಎಲ್ಲ ಜೀವಿಗಳ ಜೀವನಕ್ಕೆ ಹೇತುವಾದ, ಚೇತನವು ಒಂದೇ, ರೂಪಗಳು ಬೇರೆ ಬೇರೆಯಾದರೂ ಅವು ಶಾಶ್ತ್ವತವಲ್ಲ. ನಿತ್ಯವಲ್ಲ. ಈ ಜಗತ್ತಿನಲ್ಲಿ ಶಾಶ್ವತವಾಗಿರುವುದು ಕೇವಲ ಆ ಪರಮಾತ್ಮ ಚೇತನ. ಅದನ್ನು ನಾವು ಗುರುತಿಸಬೇಕು ಎಂಬ ಭಾವವನ್ನು ನಮಗೆ ಭೋಧಿಸುವಂತೆ “ದೃಷ್ಟಿ ಸತ್ವದೊಳಿರಲಿ” ಎಂದು ಮಾನ್ಯ ಗುಂಡಪ್ಪನವರು ಅಪ್ಪಣೆ ಕೊಡಿಸಿದ್ದಾರೆ, ಈ ಕಗ್ಗದಲ್ಲಿ. ಸತ್ಯವಾಗಿ ಒಳಗಿರುವುದೇ ಸತ್ವ. ಅದೇ ಅಂತಸತ್ವ. ಅದನ್ನು ಭಾವಿಸಬೇಕು, ಕಾಣಬೇಕು ಮತ್ತು ಅನುಭವಿಸಬೇಕು. ಅದೇ ನಿಜವಾದ ಪೂಜೆ.

ರಸಧಾರೆ - 115

ಕ್ರಮದ ನಭವಿಕೃತಿ ವಾಯ್ವಾದಿ ರೂಪಗಳಂತೆ |

ಕ್ರಿಮಿ ಬೀಜದಿಂ ಮತ್ಸ್ಯ ಮೃಗ ಮನುಜರಂತೆ ||

ಕ್ರಮವಿವರವೆನೇರಲಿ ಸೃಷ್ಟಿಯ ವಿಧಾನದಲಿ |

ಸಮಸದದು ಸತ್ವವನ್ನು ಮಂಕುತಿಮ್ಮ.||

ವಾಯ್ವಾದಿ = ವಾಯು + ಆದಿ / ಸಮಸದದು = ಸಮಸದು + ಅದು.

ಪಂಚಭೂತಗಳಿಗೆ ಒಂದು ಕ್ರಮವಿದೆ. ಸೃಷ್ಟಿಗೆ ಒಂದು ಕ್ರಮವಿದೆ ಅದು ಬದಲಾಗುವ ಕ್ರಮ. ಹೊಸ ಹೊಸ ಆವಿಷ್ಕ್ರುತ ರೂಪಗಳಲ್ಲಿ ಅದು ಕಾಣುತ್ತಲೇ ಇರುತ್ತದೆ. ಆಕಾಶ, ಭೂಮಿ ಗಾಳಿ ನೀರು ಇವೆಲ್ಲವೂ ಅವುಗಳದೇ ಆದ ಕ್ರಮದಲ್ಲಿ ಇದ್ದರೂ, ಒಂದೇ ಕ್ರಮವಿಲ್ಲದಂತೆ ಕಾಣುವುದು. ಈ ಜಗತ್ತಿನಲ್ಲಿ ಹುಟ್ಟುವ ಕ್ರಿಮಿಗಳು, ಪ್ರಾಣಿ, ಪಕ್ಷಿ, ಜಲಚರಗಳಿಗೂ ಒಂದೊಂದು ಕ್ರಮವಿದೆ. ಆಕಾರವಿದೆ, ರೂಪಗಳಿವೆ. ಆ ರೂಪಗಳು ಕಾಲಾನುಕಾಲಕ್ಕೆ ಬದಲಾಗುತ್ತಲೇ ಇರುತ್ತವೆ. ಆದರೆ ಈ ಬದಲಾವಣೆಗಳಿಗೆ ಅತೀತವಾಗಿ ಇರುವುದೇ ಆ ಪರಮ ಚೇತನ, ಪರಮಾತ್ಮ ಶಕ್ತಿ ಅಥವಾ ಆತ್ಮವೆನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಒಂದು ಪ್ರಾಣಿ ಒಂದು ತಾಯಿಯ ಗರ್ಭದಲ್ಲಿರುವಾಗ, ಸುಮಾರು ೫ ನೇ ತಿಂಗಳಿಗೆ ಆ ಭ್ರೂಣದೊಳಕ್ಕೆ ಪ್ರಾಣ ಪ್ರವೇಶವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಜೀವಕಣಗಳಿಂದ ಆದ ಆ ಭ್ರೂಣದ ಪ್ರತಿ ಕಣ ಕಣಗಳಲ್ಲೂ ಕೇಂದ್ರ ಬಿಂದುವೇ ಜೀವ. ಪ್ರತಿಕಣದಲ್ಲೂ ಜೀವ ವ್ಯಾಪಕವಾಗಿದೆ. ಹಾಗಾಗಿ ಜೀವಕ್ಕೆಲ್ಲಿ ವಾಸವೆಂದರೆ ಇಡೀ ದೇಹದಲ್ಲಿ. ಇದು ಸಕಲ ಪ್ರಾಣಿಗಳಿಗೂ ಅನ್ವಯ. ಪ್ರಾಣಿ, ಪಕ್ಷಿ, ಉರಗ, ಕೀಟ ಕ್ರಿಮಿ, ಜಲಚರ ಹೇಗೆ ಎಲ್ಲಕೂ ಅನ್ವಯ. ದೇಹ ಚಿಕ್ಕದಾಗಿದ್ದಲೂ ಅದೇ ಜೀವ, ಬೆಳೆದು ದೇಹ ದೊಡ್ದದಾದಮೆಲೂ ಅದೇ ಜೀವ. ಏಕೆಂದರೆ ಜೀವಕ್ಕೆ ಆಕಾರವಿಲ್ಲ. ಅದು ನಿರಾಕಾರ. ದೇಹ ಬೆಳೆಯುತ್ತದೆ. ಆದರೆ ಜೀವದ ಚೇತನದ ಸ್ವರೂಪ ಮಾತ್ರ ನಿಶ್ಚಲ.

ಎಂದು ಆ ರೂಪ ಅಥವಾ ದೇಹ ಆ ಜೀವ, ಅಥವಾ ಪ್ರಾಣ ಅಥವಾ ಚೇತನಕ್ಕೆ ವಾಸಕ್ಕೆ ಸೂಕ್ತವಲ್ಲವೋ ಅಂದು ಜೀವ ದೇಹದಿಂದ ದೂರಾಗುತ್ತದೆ, ತನ್ನ ರೂಪ ಬದಲಾಯಿಸಿಕೊಳ್ಳುತ್ತದೆ. ಹೀಗೆ ಎಷ್ಟೇ ರೂಪ ಬದಲಾವಣೆಯಾದರೂ, ಜೀವ ಬೇರೆ ಬೇರೆ ದೇಹಗಳನ್ನು ಬದಲಾಯಿಸಿಕೊಂಡು ತನ್ನನ್ನು ತಾನು ರೂಪಾಂತರಿಸಿಕೊಂಡರೂ ಜೀವದಲ್ಲಿ ಯಾವ ಬದಲಾವಣೆಯೂ ಇರುವುದಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು

“ಸಮಸದದು ಸತ್ವವನು” ಎಂದರೆ “ಸವೆಯದು ಆ ಸತ್ಯವಾದ ಸತ್ವ”, ಎನ್ನುತ್ತಾರೆ ಶ್ರೀ ಡಿ.ವಿ.ಜಿ.

ಹಾಗಾಗಿ ವಾಚಕರೆ ನಮ್ಮಲ್ಲಿರುವ ಚೇತನವೆ ಸತ್ಯ ಮತ್ತು ನಿತ್ಯ. ಅದು ಬದಲಾಗುವುದಿಲ್ಲ. ಅದೇ ನಾವು. ರೂಪಾಂತರಗೊಳ್ಳುವ ಈ ದೇಹವು ನಾವಲ್ಲ. ಇದನ್ನು ಅರಿತುಕೊಂಡರೆ ನಮಗೆ ನಮ್ಮ ಪರಿಚಯವಾಗುತ್ತದೆ. ಅದಾಗಿಬಿಟ್ಟರೆ , ನಾವು ನಮ್ಮ ಎಲ್ಲ ಮಾನಸಿಕ, ಭೌದ್ಧಿಕ ವಿಕಾರಗಳಿಂದ ಮುಕ್ತರಾಗಬಹುದು.

ಆತ್ಮನನ್ನು ಅರಿಯುವ ಪ್ರಯತ್ನವನ್ನು ನಾವೂ ಸಹ ಮಾಡೋಣ.

ರಸಧಾರೆ - 116

ಪರಮಾಣುವಿಂ ಪ್ರಪಂಚಗಳ ಸಂಯೋಜಿಪುದು |

ಮರೆಯಿಂದ ಸೃಷ್ಟಿಯಂತ್ರವ ಚಾಲಿಪುದು ||

ಚರಲೀಲೆಯಲಿ ಜೀವವೆನಿಪ ಚೈತನ್ಯವದು |

ಪರಸತ್ವಶಕ್ತಿಯೆಲೊ – ಮಂಕುತಿಮ್ಮ ||

ಪರಮಾಣುವಿಂ = ಪರಮ ಅಣುವಿನಿಂದ, ಸಂಯೋಜಿಪುದು = ಒಂದು ಸೂತ್ರದಲ್ಲಿ ಪೋಣಿಸುವುದು , ಚಾಲಿಪುದು = ಚಲನೆ ಕೊಡುತ್ತದೆ, ಚರಲೀಲೆಯಲಿ = ನಿರಂತರ ಬದಲಾಗುವ ಜಗತ್ತಿನ ಲೀಲೆಯಲಿ, ಜೀವವೆನಿಪ ಚೈತನ್ಯವದು = ಜಗತ್ತಿನಲ್ಲಿ ಜೀವವೆಂದು ಕರೆಯಲ್ಪಡುವ ಚೈತನ್ಯವದು. ಪರಸತ್ವಶಕ್ತಿಯೆಲೊ = ಆ ಶಕ್ತಿಯೇ ಪರಸತ್ವ ಎಲೋ!

ಇಡೀ ಜಗತ್ತನ್ನು ಪರಮಾಣುಗಳನ್ನು ಪೋಣಿಸುವ ಕ್ರಿಯೆಯಿಂದ ಈ ಜಗತ್ತಿನ ಎಲ್ಲವನ್ನೂ ಒಂದು ಸೂತ್ರದಲ್ಲಿ ಇರುವಂತೆ ಸೃಷ್ಟಿಸಿ, ಇದನ್ನು ನಡೆಸಲು ಒಂದು ಕ್ರಮವನ್ನು ಉಂಟುಮಾಡಿ , ಅದರ ಚಲನೆಗೆ ತಾನೇ ಕಾರಣವಾಗಿ, ಈ ಜಗತ್ತಿನ ಲೀಲಾವಿನೋದವನ್ನು ನಡೆಸುವ ಜೀವವೆಂದು ಹೆಸರು ಪಡೆದ ಅದೇ ಚೈತನ್ಯ. ಆ ಚೈತನ್ಯವೇ, ಪರಮಾತ್ಮ, ಪರಮ ಶಕ್ತಿ ಮತ್ತು ಪರ ಸತ್ವ ಎನ್ನುತ್ತಾರೆ ಮಾನ್ಯ ಡಿ ವಿ.ಜಿ ಯವರು ಈ ಕಗ್ಗದಲ್ಲಿ.

ಒಂದು ಪ್ರಾಣಿಯ, (ಮನುಷ್ಯನನ್ನೂ ಸೇರಿದಂತೆ ) ದೇಹವನ್ನು ಉದಾಹರಣೆಗೆ ತೆಗೆದುಕೊಳ್ಳೋಣ. ನಮ್ಮ ದೇಹದ ಎಲ್ಲ ಭಾಗಗಳೂ ಜೀವಕಣಗಳಿಂದ ಆಗ ಮಾಡಲ್ಪಟ್ಟಿದೆ. ಅದು ಚರ್ಮ, ಮಾಂಸ ಖಂಡ, ನರ, ರಕ್ತ , ಮೂಳೆ ಯಾವುದೇ ಆಗಿರಬಹುದು. ಅವೆಲ್ಲವೂ ಜೀವಕಣಗಳಿಂದಲೇ ಆಗಿವೆ ಅಲ್ಲವೇ? ಜೋಡಣೆಯಲ್ಲಿ ವ್ಯತ್ಯಾಸವಾದಾಗ, ಅದು ಬೇರೆ ಬೇರೆ ಅಂಗಗಳಾಗುತ್ತವೆ ಮತ್ತು ಅವುಗಳ ಜೋಡಣೆಗೆ ಅನುಗುಣವಾಗಿ ಬೇರೆ ಬೇರೆ ಕೆಲಸವನ್ನು ಮಾಡುತ್ತವೆ. ಈ ಕಣವನ್ನು “ಸೆಲ್” ಎನ್ನುತ್ತಾರೆ. ಈ “ಸೆಲ್” ನಲ್ಲಿ ಒಂದು ಜೀವಸೆಲೆ ವ್ಯಾಪಿಸಿಕೊಂಡು ಅದನ್ನು ಜೀವಕಣವೆನ್ನಿಸುತ್ತದೆ . ನಮ್ಮ ಶರೀರದಲ್ಲಿ ನಾವು ಸೇವಿಸುವ ಆಹಾರದಿಂದ ಲಕ್ಷಾಂತರ ಜೀವಕಣಗಳು ಉತ್ಪತ್ತಿಯಾಗುತ್ತದಂತೆ ಮತ್ತು ನಾವು ಮಾಡುವ ಕೆಲಸದಿಂದ ಲಕ್ಷಾಂತರ ಜೀವಕಣಗಳು ನಾಶವಾಗುತ್ತವಂತೆ. ಒಂದೊಂದು ಅಣುವಿನ ನಾಶಕ್ಕೂ ಮತ್ತೆ ಸೃಷ್ಟಿಗೂ ಕಾರಣವಾದ “ಇಂದನ “ಆ ಜೀವ ಸೆಲೆ. ಅದನ್ನೇ ಜೀವವೆನ್ನುತ್ತಾರೆ. ಆ ಜೀವ ಸೆಲೆಯೇ ಪರಮಾತ್ಮ ಶಕ್ತಿಯ ಅಥವಾ ಪರಮ ಚೇತನದ ಒಂದು ಅಂಶ. ಅದರ ಕೆಲಸದಿಂದಲೇ ಈ ಜೀವನದ, ಜಗತ್ತಿನ ಲೀಲಾವಿನೋದ ನಡೆಯುತ್ತದೆ. ಇದನ್ನೇ ಆ ಪರಮಾತ್ಮನ ಲೀಲಾವಿನೋದವೆನ್ನುಬಹುದು.

ಜಗತ್ತಿನ ಎಲ್ಲವೂ ಕಣಗಳಿಂದಲೇ ಆಗಿದೆ. ಗಾಳಿ ನೀರು, ಆಕಾಶ, ಭೂಮಿ ಗಿಡ ಮರ ಪ್ರಾಣಿ ಪಕ್ಷಿ ಕೀಟ ಎಲ್ಲವೂ. ಆ ಕಣದಲ್ಲಿ ಜೀವ ಅಥವಾ ಚೇತನ ಸಂಚಾರವಾದಾಗ ಅದು ಜೀವ ಕಣವಾಗುತ್ತದೆ. ಜೀವಿಗಳ ಕೋಟ್ಯಾಂತರ ರೂಪಗಳಿಗೆ ಕಾರಣವಾಗುತ್ತದೆ. ಕಣ್ಣಿಗೆ ಕಾಣದಿದ್ದರೂ ಎಲ್ಲಕ್ಕೂ ಚಾಲನೆಯನ್ನು ನೀಡುವ ಆ ಚೇತನವೇ ಜೀವ. ಇದನ್ನೇ ನಮ್ಮ ಗುಂಡಪ್ಪನವರು “ಮರೆಯಿಂದ ಸೃಷ್ಟಿಯಂತ್ರವ ಚಾಲಿಪುದು” ಎಂದರು. ವಾಚಕರೆ ಎಲ್ಲ ಜೀವಿಗಳಿಗೂ ಒಂದು ರೂಪ. ಪ್ರತಿರೂಪಕ್ಕೂ ಆ ಜೀವಕಣಗಳ ಜೋಡಣೆಯ ವಿನ್ಯಾಸ ಬೇರೆ ಬೇರೆ. ವಿನ್ಯಾಸ ಬೇರೆಯಾದಾಗ ಅದಕ್ಕೆ ಬೇರೆಯೇ ಹೆಸರು. ಮನುಷ್ಯ, ಕೋತಿ, ಆನೆ , ಹಾವು , ಹದ್ದು ಇತ್ಯಾದಿ. ಮೂಲದಲ್ಲಿ ಎಲ್ಲವೂ ಚೈತನ್ಯದಿಂದ ಕಾರ್ಯ ಪ್ರವ್ರುತ್ತವಾದ ಜೀವಕಣಗಳ ಸಮಷ್ಟಿ ರೂಪ. ಆನೆಯದರೂ ಅಷ್ಟೇ , ಇರುವೆಯಾದರೂ ಅಷ್ಟೇ. ಹಾಗಾಗಿ ನಾವು ನೋಡುವುದೇನು ಆ ಜೀವಕಣಗಳ ಜೋಡಣೆಯನ್ನು. ಕಾಣಲಾಗದ್ದು ಏನೆಂದರೆ, ಹೀಗೆ ಜೋಡಿಸಲ್ಪಟ್ಟ ಕಣಗಳ ಗುಂಪಿಗೆ ಚಾಲನೆಯನ್ನು ನೀಡುವ ಚೈತನ್ಯವನ್ನು. ಈ ಕಣಗಳ ಜೋಡಣೆ ಮತ್ತು ಅವುಗಳನ್ನು ಚಾಲಿಸುವ ಚೈತನ್ಯದ ನಡುವಿನಲ್ಲಿ “ನಾನು ” ಎಂಬುದು ಎಲ್ಲಿದೆ ಎಂದು ಹುಡುಕಿದರೆ ನಮಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ನಾವು ರೂಪ ಭೇದವನ್ನು ಕಾಣದೆ, ರೂಪವೇ ಇಲ್ಲದ, ಆಕಾರವೇ ಇಲ್ಲದ, ಆ ರೂಪಕ್ಕೆ ಚೈತನ್ಯದ ಹೇತುವಾದ ಎಲ್ಲ ಪ್ರಾಣಿಗಳಲ್ಲೂ ಸಮಾನವಾಗಿರುವ ಆ ಚೈತನ್ಯದ ಬೃಹತ್ ರೂಪವನ್ನು ಕಾಣಲಾದರೆ, ನಾವು ಆಂತರಿಕವಾಗಿ ಬೆಳೆದಂತೆ ಅಲ್ಲವೇ? ಅಂತಹ ಬೆಳವಣಿಗೆಯ ಪ್ರಯತ್ನವನ್ನು ನಾವೂ ಮಾಡೋಣವೆ?

ರಸಧಾರೆ - 117

ಸ್ಥಾಪಿತವೆ ಜೀವ ನಿನ್ನೊಡಲಿನೊಂದಂಗದಲಿ ? |

ಆಪಾದಶಿರವುಮದು ತುಂಬಿರುವುದಲ್ತೆ ||

ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ |

ಲೇಪಗೊಳ್ಳದ ಸತ್ವ – ಮಂಕುತಿಮ್ಮ ||

ನಿನ್ನೊಡಲಿನೊಂದಂಗದಲಿ = ನಿನ್ನ+ ಒಡಲಿನ + ಒಂದು + ಅಂಗದಲ್ಲಿ// ಆಪಾದಶಿರವುಮದು = ಆಪಾದ+ಶಿರವುಂ + ಅದು // ತುಂಬಿರುವುದಲ್ತೆ = ತುಂಬಿರುವುದು + ಅಳತೆ //ವ್ಯಾಪಿಸಿಹುದಂತೊಂದು= ವ್ಯಾಪಿಸಿಹುದು + ಅಂತ+ ಒಂದು

ಆಪಾದಶಿರವುಮದು = ಕಾಲ ತುದಿಯಿಂದ ನೆತ್ತಿಯವರೆಗೆ. ಲೇಪಗೊಳ್ಳದ = ಅಂಟಿಕೊಳ್ಳದ, ವ್ಯಾಪಿಸಿಹುದು = ಹರಡಿಕೊಂಡಿದೆ.

ಆ ಜೀವವೆನ್ನುವ ಚೈತನ್ಯ ಕೇವಲ ನಿನ್ನ ಯಾವೊದೋ ಒಂದು ಅಂಗದಲ್ಲಿ ತುಂಬಿದೆ ಎಂದು ಕೊಂಡಿದ್ದೀಯಾ? ಅದು ನಿನ್ನ ಅಡಿಯಿಂದ ಮುಡಿಯವರೆಗೆ ಅಂದರೆ ಪಾದದಿಂದ ಶಿರದವರೆಗೆ, ಇಡೀ ದೇಹವನ್ನು ವ್ಯಾಪಿಸಿಕೊಂಡಿದೆ. ಹೇಗೆ ಅದು ನಮ್ಮ ದೇಹದಲ್ಲಿ ವ್ಯಾಪಕವಾಗಿದೆಯೋ ಹಾಗೆಯೇ, ಇಡೀ ವಿಶ್ವದಲ್ಲಿ ಒಂದು ಅಂಗುಲವೂ ಬಿಡದೆ ಎಲ್ಲೆಡೆ ವ್ಯಾಪಿಸಿಕೊಂಡಿದೆ. ಹಾಗೆ ವ್ಯಾಪಿಸಿಕೊಂಡಿದ್ದರೂ, ಎಲ್ಲೂ ಯಾವುದಕ್ಕೂ ಅಂಟದೆ ಇರುವುದೇ ಆ ಚೈತನ್ಯದ ಗುಣ ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಆ ಬೃಹಚ್ಚೇತನದ ಒಂದು ಅಂಶವಾದ ನಮ್ಮೊಳಗಿರುವ ಚೇತನ ಯಾವುದೋ ಒಂದು ಅಂಗದಲ್ಲಿರದೆ, ಎಲ್ಲ ಅಂಗಗಳಿಗೂ ಏನು, ಇಡೀ ದೇಹಕ್ಕೇ ಇಂಬು ಕೊಡುವ ಅದು ದೇಹದಲ್ಲೆಲ್ಲ ಒಂದು ಅಂಗುಲವೂ ಬಿಡದೆ, ಸಮಾನವಾಗಿ ವ್ಯಾಪಿಸಿಕೊಂಡಿದೆ, ಅಷ್ಟೇ ಅಲ್ಲ ಒಳಗಿರುವ ಆ ಚೈತನ್ಯವೇ ಜಗತ್ತೆಲ್ಲ ವ್ಯಾಪಿಸಿಕೊಂಡಿದೆ ಎನ್ನುವುದು ಪರಮ ಸತ್ಯ. ಜಗತ್ತಿನ ಜಡ ಚರ ಎಲ್ಲವಸ್ತುಗಳಲ್ಲೂ, ಕೆಲವು ಕಡೆ ಸುಪ್ತವಾಗಿ ಕೆಲವು ಕಡೆ ಸಕ್ರಿಯವಾಗಿ ಇರುವ ಚೈತನ್ಯವೇ ಆ ಪರಮ ಪುರುಷನ ಶಕ್ತಿ. ಏಕೆಂದರೆ ಆ ಪರಮ ಚೈತನ್ಯವೇ ತನ್ನದೇ ಶಕ್ತಿಯಿಂದ ತಾನೇ ಬೇರೆ ರೂಪದಲ್ಲಿ ಪ್ರಕಟಗೊಂಡು ಆ ರೂಪಗಳ ಸಕ್ರಿಯತೆಗೆ ತಾನೇ ಕಾರಣವಾಗಿರುವಾಗ, ಅದು ಇಲ್ಲದ ಸ್ಥಳವಿರಲು ಸಾಧ್ಯವೇ. ಇದನ್ನೇ ಮಾನಿ ಡಿ.ವಿ.ಜಿ ಯವರು “ವ್ಯಾಪಿಸಿಹುದಂತೊಂದು ಚೈತನ್ಯ ವಿಶ್ವದಲಿ” ಎನ್ನುತ್ತಾರೆ.

ಆದರೆ ಆ ಚೈತನ್ಯದ ಸ್ವರೂಪವೇನೆಂದು ಯಾರೂ ಅರಿಯರು. ಎಲ್ಲ ರೂಪಗಳೂ ಅದೇ ಆಗಿರುವಾಗ, ಯಾವುದೇ ಒಂದು ರೂಪಕ್ಕೆ ಅದನ್ನು ಸೀಮಿತಗೊಳಿಸಲಾಗುವುದಿಲ್ಲ, ಅಲ್ಲವೇ? ಎಲ್ಲವನ್ನೂ ಮಾಡಿ ಎಲ್ಲದರೊಳಗೂ ಇದ್ದು ಎಲ್ಲವನ್ನೂ ಸಕ್ರಿಯವಾಗಿ ಇಡಲು ಪೂರಕವಾದ ಈ ಚೈತನ್ಯ ಯಾವುದಕ್ಕೂ ಅಂಟದೆ ಇದ್ದೂ ಇಲ್ಲದ ಹಾಗೆ, ಅಂಟೀ ಅಂಟದ ಹಾಗೆ, ಕಂಡೂ ಕಾಣದ ಹಾಗೆ ಇದೆ. ನಾವು ಎಲ್ಲದರಲ್ಲೂ ಇರುವ ಆ ಮಹಾ ಚೈತನ್ಯಕ್ಕೆ ನಮಿಸೋಣ, ಅದನ್ನು ಭಾವಿಸೋಣ, ಈ ಸೃಷ್ಟಿಯ ಎಲ್ಲದರಲ್ಲೂ ಆ ಚೈತನ್ಯವೇ ಇದೆಯೆಂಬ ಭಾವವನ್ನು ನಮ್ಮ ನಮ್ಮ ಮನಗಳಲ್ಲಿ ಗಟ್ಟಿಯಾದ ನಂಬಿಕೆಯಿಂದ, ಎಲ್ಲವನ್ನೂ, ಆ ಪರಮಾತ್ಮನ ಪ್ರತಿರೂಪವೆಂದು ಗೌರವಿಸುವ ಮನಸ್ಸು ನಮಗೆ ಆ ಪರಮಾತ್ಮ ಕರುಣಿಸಲಿ ಅಲ್ಲವೇ?

ರಸಧಾರೆ - 118

ರವಿಮಾತ್ರದಿಂದಲ್ಲ ಭುವಿಮಾತ್ರದಿಂದಲ್ಲ |

ಭುವನಪೋಷಣೆಯುಭಯ ಸಹಕಾರದಿಂದ ||

ವಿವಿಧಶಕ್ತಿರಸಂಗಳೇಕೀಭವಿಸೆ ಜೀವ |

ಅವಿತರ್ಕ್ಯ ಸೂಕ್ಷ್ಮವದು – ಮಂಕುತಿಮ್ಮ

ರವಿಮಾತ್ರದಿಂದಲ್ಲ = ರವಿ +ಮಾತ್ರದಿಂದ+ ಅಲ್ಲ, ಭುವಿಮಾತ್ರದಿಂದಲ್ಲ = ಭುವಿ +ಮಾತ್ರದಿಂದ +ಅಲ್ಲ, ಭುವನಪೋಷಣೆಯುಭಯ = ಭುವನ + ಪೋಷಣೆಯು + ಉಭಯ, ವಿವಿಧಶಕ್ತಿರಸಂಗಳೇಕೀಭವಿಸೆ = ವಿವಿಧ+ಶಕ್ತಿ+ ರಸಂಗಳು+ ಏಕೀಭವಿಸೆ , ಅವಿತರ್ಕ್ಯ= ಅ ವಿತರ್ಕ್ಯ, ಸೂಕ್ಷ್ಮವದು = ಸೂಕ್ಷ್ಮವು ಅದು

ಭುವನಪೋಷಣೆ= ಈ ಭುವಿಯ ಪೋಷಣೆ, ಉಭಯ = ಎರಡು, ಏಕೀಭವಿಸೆ = ಸೇರಿದರೆ, ಅವಿತರ್ಕ್ಯ= ತರ್ಕಮಾಡಲಾಗದ್ದು

ಕೇವಲ ಸೂರ್ಯನಿಂದಾಗಲೀ ಅಥವಾ ಕೇವಲ ಪ್ರುತ್ವೀತತ್ವದಿಂದಾಗಲೀ ಈ ಭೂಮಿಯು ಅಸ್ತಿತ್ವದಲ್ಲಿಲ್ಲ. ಈ ಭೂಮಿಯ ಅಸ್ಥಿಸ್ತ್ವಕ್ಕೆ ಈ ಎರಡರ ಸಹಕಾರವೂ ಬೇಕು. ಅಷ್ಟೇ ಅಲ್ಲ ಇವೆರಡರ ಸಹಕಾರದಿಂದ ಈ ಭೂಮಿಯ ಮೇಲ್ಮೈಯಲ್ಲಿ ಮತ್ತು ಅಂತರ್ಯದಲ್ಲಿ ಉತ್ಪತ್ತಿಯಾಗುವ ಹಲವಾರು ಜೀವರಸಗಳ ಸಮ್ಮಿಲನದಿಂದ ಇಲ್ಲಿ ಜೀವಿಗಳ ಜೀವಿಕೆ ಸಾಧ್ಯ. ಆದರೆ ಇದು ಏಕೆ ಹೀಗೆ? ಹಾಗೆ ಯಾಕಿರಬಾರದು? ಇದು ಹೀಗೇ ಏಕಾಗುತ್ತದೆ ಹಾಗೇಕಿರಬಾರದು, ಇದು ಸರಿ, ಅದು ಸರಿಯಿಲ್ಲ ಎನ್ನುವಂತಾ ತರ್ಕ ಕುತರ್ಕಗಳಿಗೆ ಸಿಗದ ಸೂಕ್ಷ್ಮವಿಚಾರವಿದು ಎನ್ನುತ್ತಾರೆ ಮಾನ್ಯ ಗುಂಡಪ್ಪನವರು.

ಪರಮಾತ್ಮನಿಂದಾದ ಈ ಜಗತ್ತಿನಲ್ಲಿ ಸೃಷ್ಟಿಸಲ್ಪಟ್ಟ ಕೋಟಿ ಕೋಟಿ ಕಾಯಗಳಲ್ಲಿ ಈ ಭೂಮಿ ಒಂದು ಸಣ್ಣ ಕಾಯ. ನಾವು ಇದರ ಮೇಲೆ ಜೀವಿಸಿದ್ದೇವೆ. ಹಾಗಾಗಿ ನಮಗಿದು ಪರಿಚಿತ. ಅನ್ಯ ಆಕಾಶ ಕಾಯಗಳ ವಿಚಾರ ನಮ್ಮ ಅರಿವಿನ ಪರಿಧಿಯಿಂದ ದೂರ, ಅಲ್ಲವೇ? ಹಾಗಾಗಿ ನಾವು ಕೇವಲ ಈ ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ನೋಡುವ. ಮೂರ ಭಾಗ ನೀರು ಒಂದು ಭಾಗ ಭೂಮಿ. ಮೇಲೆ ಆಕಾಶ ಬೀಸುವ ಗಾಳಿ ನೆತ್ತಿಯಮೇಲೆ ಸೂರ್ಯ, ಮತ್ತು ಅನ್ಯ ಗ್ರಹಗಳು, ಚಂದ್ರ. ಇವೆಲ್ಲ ನಮಗೆ ಕಾಣುತ್ತದೆ. ಸೂರ್ಯನಿಂದ ಬೆಳಕು ಮತ್ತು ಶಾಖ ನಮಗೆ ಸಿಗುತ್ತದೆ. ಬೆಳಕು ಕಾಣುತ್ತದೆ, ಶಾಖವನ್ನು ಅನುಭವಿಸಬಹುದು. ಆದರೆ ಆ ಸೂರ್ಯನಿಂದ ಭೂಮಿಗೆ ಈ ಬಿಸಿಲು ಮತ್ತು ಶಾಖದ ಜೊತೆಗೆ ಹರಿದುಬರುವ ಜೀವರಸಗಳ ಪ್ರವಾಹವನ್ನು ನಾವು ಕಾಣಲೂ ಆಗುವುದಿಲ್ಲ, ಅನುಭವಿಸಲೂ ಆಗುವುದಿಲ್ಲ. ಆದರೂ ನಾವೆಲ್ಲಾ ಅದರ ಪ್ರಭಾವಕ್ಕೊಳಗಾಗುತ್ತೇವೆ, ಅಲ್ಲವೇ?

ಹಾಗೆಯೇ ಈ ಭೂಮಿಯು, ಆ ಸೂರ್ಯನಿಂದ ಬೆಳಕು ಮತ್ತು ಶಾಖದೊಂದಿಗೆ ಹರಿದುಬರುವ ಹಲವಾರು ಜೀವರಸಗಳನ್ನು ತನ್ನ ಗರ್ಭದೊಳಕ್ಕೆ ಬಟ್ಟಿ ಇಳಿಸಿಕೊಂಡು ತನ್ನ ಸತ್ವವನ್ನೂ ಅದಕ್ಕೆ ಮಿಶ್ರಣ ಮಾಡಿ ಸಸಿ, ಗಿಡ ಮರಗಳಿಗೆ ಅವುಗಳ ಬೇರುಗಳ ಮೂಲಕ ತುಂಬಿ ಇಡೀ ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳಿಗೆ ಆಹಾರವನ್ನು ಒದಗಿಸಿ, “ಅನ್ನಪೂರ್ಣೆ” ಎನ್ನುವ ಹೆಸರನ್ನು ಪಡೆದಿದೆ. ಅದನ್ನೇ ಮಾನ್ಯ ಗುಂಡಪ್ಪನವರು “ಉಭಯರ ಸಹಕಾರದಿಂದ” ಎನ್ನುತ್ತಾರೆ.

ಅಷ್ಟೇ ಅಲ್ಲ ಬೀಸುವ ಗಾಳಿ, ಸುರಿಯುವ ಮಳೆ, ಇವೆಲ್ಲವನ್ನೂ ಒಂದಕ್ಕೊಂದು ಸಹಕರಿಸುವಂತೆ ಮಾಡುವ ಆ ಪರಮ ಚೇತನ ಎಲ್ಲವೂ ಈ ಇಳೆಯ ಜೀವರಾಶಿಗಳ ಅಸ್ತಿತ್ವಕ್ಕೆ ಸಹಕಾರಿಗಳಾಗೆ ಇವೆ. ಆದರೆ ಆ ಸೂರ್ಯ, ಈ ಭೂಮಿ, ಆ ಗಾಳಿ, ಸೂರ್ಯನ ಬೆಳಕು ಮತ್ತು ಶಾಖ ಮತ್ತು ಆ ಪರತತ್ವ, ಯಾವ ಕ್ರಮದಲ್ಲಿ ಕೆಲಸ ಮಾಡುತ್ತವೆ, ಅವುಗಳ ಕಾರ್ಯದಿಂದ ಪರಿಣಾಮಗಳು ಹೇಗೆ ಆಗುತ್ತವೆ ಎನ್ನುವುದು ಬಹಳ ಸೂಕ್ಷ್ಮ ವಿಚಾರ ಮತ್ತು ನಮ್ಮಂತಹ ಸಾಮಾನ್ಯರಿಗೆ ಅರ್ಥವಾಗುವುದೇ ಇಲ್ಲ. ಈ ಜಗತ್ತಿನಲ್ಲಿ ನಾವು ಜನಿಸಿದ್ದೇವಾದ್ದರಿಂದ ಕೇವಲ ಇವೆಲ್ಲವನ್ನೂ ನೋಡುತ್ತಾ, ಆನಂದಿಸುತ್ತಾ, ಅನುಭವಿಸಬೇಕಷ್ಟೇ. ಇವುಗಳನ್ನು ವಿಶ್ಲೇಷಣೆ ಮಾಡಿ ತರ್ಕ ಕುತರ್ಕಗಳಿಂದ ಅತಿ ಬುದ್ಧಿವಂತಿಕೆಯನ್ನು ತೋರುವುದು ಸರಿಯಲ್ಲ.

ಆ ಪರಮಾತ್ಮನ ಕೃಪೆಯಿಂದ, ಇವೆಲ್ಲವೂ ಆಗಿವೆ. ಅ ಪರಮ ಶಕ್ತಿಯ ನಿರ್ದೇಶನದಂತೆ ಅವೆಲ್ಲವೂ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಿವೆ. ವಾಚಕರೆ, ಅವುಗಳು ಸಮರ್ಪಕವಾಗಿ ಕೆಲಸ ಮಾಡುತ್ತಿರುವುದರಿಂದ, ನಮ್ಮ ಜೀವನ ಸುಗಮವಾಗಿ ಸಾಗುತ್ತಿದೆ ಎಂದು ಅರ್ಥಮಾಡಿಕೊಂಡು, ಸುಭಾವದಿಂದ ಒಪ್ಪಿಕೊಂಡು, ಅದಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ಈ ಭುವಿಯಲ್ಲಿ ಕುತರ್ಕ-ಕುಭಾವಗಳಿಲ್ಲದೆ ಸಂತೋಷ ಮತ್ತು ಆನಂದದಿಂದ ಬಾಳಬೇಕು ಅಲ್ಲವೇ? ಅಂತಹ ಪ್ರಯತ್ನವನ್ನು ನಾವೂ ಸಹ ಮಾಡೋಣವೆ?

ರಸಧಾರೆ - 119

ನಾವುಣ್ಣುವನ್ನಗಳು ನಾವು ಕುಡಿವುದಕಗಳು |

ನಾವುಸಿರುವೆಲರುಗಳು ನಾವುಡುವ ವಸ್ತ್ರ ||

ಭೂವ್ಯೋಮಗಳ ಯಂತ್ರಸಂಘದುತ್ಪನ್ನಗಳು |

ಜೀವವಿವೆರಡರ ಶಿಶುವು – ಮಂಕುತಿಮ್ಮ

ನಾವು ತಿನ್ನುವ ಆನ್ನ, ನಾವು ಕುಡಿಯುವ ನೀರು ನಾವು ಉಸಿರಾಡುವ ಗಾಳಿ ನಾವು ಉಡುವ ಬಟ್ಟೆ ಎಲ್ಲವೂ ಆಕಾಶ ಮತ್ತು ಭೂಮಿಯ ಪರಸ್ಪರ ಸಮ್ಮಿಲನದಿಂದ ತಯಾರಿಸಲ್ಪಡುವ ಉತ್ಪನ್ನಗಳು. ನಮ್ಮಲ್ಲಿ ಇರುವ ಚೇತನವೂ ಸಹ ಈ ಭೂಮಿ ಮತ್ತು ಆಕಾಶಗಳ ಶಿಶುವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ಭೂಮಿಯ ಮೇಲಿನ ಸಮುದ್ರದ ನೀರು ಸೂರ್ಯನ ಶಾಖಕ್ಕೆ ಆವಿಯಾಗಿ ಮೋಡವಾಗಿ ಮಳೆಯಾಗಿ, ಧರೆಗೆ ಸುರಿದು, ಆ ಮಳೆಯ ಜೊತೆಗೆ ಈ ಭೂಮಿಯ ಮೇಲಿನ ಅನೇಕ ಜೀವರಸಗಳನ್ನೂ ಹೀರಿ ಅದನ್ನು ಮತ್ತೆ ಮಳೆಯ ಜೊತೆಗೆ ಈ ಭೂಮಿಗೆ ಸುರಿಸಿ, ಇಲ್ಲಿ ಜೀವಿಗಳಿಗೆ ಎಲ್ಲ ಅವಶ್ಯಕ ವಸ್ತುಗಳನ್ನೂ ಒದಗಿಸುವ ಈ ಭೂಮಿ ಮತ್ತು ಸೂರ್ಯನ ಪರಸ್ಪರ ಸಂಬಂಧ ಅತೀ ಅಮೋಘವಲ್ಲವೇ ವಾಚಕರೆ. ಅತೀ ಸೂಕ್ಷ್ಮವಾದ ಪ್ರಕ್ರಿಯೆ ಇದು.

ನಾವು ತಿನ್ನುವ ಆಹಾರದ ವೈವಿಧ್ಯತೆಯನ್ನು ನೋಡಿ. ಎಷ್ಟೊಂದು ವಿಧದ ಕಾಳುಗಳು, ದಾನ್ಯಗಳು, ಸೊಪ್ಪುಗಳು, ಕಾಯಿಪಲ್ಲೆಗಳು, ಹಣ್ಣುಗಳು, ಗೆಡ್ಡೆ ಗೆಣಸುಗಳು, ಪ್ರಾಣಿಗಳಿಗೆ ಮೀಸಲಾದ ಹಲವಾರು ಆಹಾರಗಳು. ಮನುಷ್ಯರು ತಿನ್ನುವಂಥ ಆಹಾರಗಳೇ ಬೇರೆ ಬೇರೆ. ಈ ಎಲ್ಲ ಆಹಾರಗಳೂ ಬಿಸಿಲು, ಶಾಖ, ಮಳೆ ಭೂಮಿ ಗಿಡ ಮರಗಳು ಇವುಗಳ ಪರಸ್ಪರ ಸಂಬಂಧದಿಂದಲೇ ಸಾಧ್ಯ. ತೈತ್ತರೀಯ ಉಪನಿಷತ್ತು ಈ ವಿಷಯವನ್ನು ” ಆಕಾಶಾದ್ವಾಯು: ವಾಯೋರಗ್ನಿ: ಅಗ್ನೇರಾಪ: ಅದ್ಭ್ಯಃ ಪೃಥಿವೀ ಪೃಥಿವ್ಯಾ ಓಷದಯಃ ಓಷಧೀಭ್ಯೋನ್ನಂ ಅನ್ನಾತ್ ಪುರುಷಃ ” ಎಂದು ಈ ಕಗ್ಗದಲ್ಲಿ, ಈ ಉಪನಿಷತ್ತಿನ ವಿಷಯವನ್ನು ಸುಲಲಿತವಾಗಿ ಗುಂಡಪ್ಪನವರು ಪ್ರತಿಪಾದಿಸಿದ್ದಾರೆ.

ಪ್ರಕೃತಿಯಲ್ಲಿ ಪಂಚಭೂತಗಳ ಪರಸ್ಪರ ಒಡಂಬಡಿಕೆಯಿಂದಲೇ ನಮ್ಮ ನಿಮ್ಮ ಮತ್ತು ಸಕಲ ಜೀವರಾಶಿಗಳ ಅಸ್ತಿತ್ವ. ಆಕಾಶದಲ್ಲಿರುವ ವಾಯು ಸೂರ್ಯನ ಶಾಖದಿಂದ ಉಂಟಾದ ಆವಿಯನ್ನು ಹೂವನ್ನೆತ್ತುವಂತೆ ಎತ್ತಿ ನಭಕ್ಕೆ ಒಯ್ದು, ಮೋಡವಾಗಿಸಿ, ತನ್ನ ಶಕ್ತಿಯಿಂದಲೇ ಆ ಮೋಡಗಳನ್ನು ಒಗ್ಗೂಡಿಸಿ, ಹಾಗೆ ಸತ್ವಯುತವಾದ ಮೋಡಗಳಿಂದ ಧರೆಗೆ ಮಳೆಯನ್ನೂ ಸುರಿಸುತ್ತದೆ. ಹಾಗೆ ಸುರಿಸಿದ ಮಳೆಯನ್ನ್ನು ಈ ಧರೆ ಹೀರಿ ಅದರ ಸತ್ವವನ್ನು ಕರಗಿಸಿಕೊಂಡು ತನ್ನೊಳಗಿನ ಸತ್ವಗಳನ್ನೂ ಸೇರಿಸಿ, ಗಿಡಮರಗಳ ಬೆಳವಣಿಗೆಗೆ ಕಾರಣವಾಗಿ ಆಹಾರ ಉತ್ಪತ್ತಿಗೆ ಕಾರಣವಾಗಿ ಆ ಆಹಾರ ರೂಪದಲ್ಲಿ ಶಕ್ತಿಯನ್ನು, ಜಗತ್ತಿನ ಎಲ್ಲ ಜೀವಿಗಳಿಗೆ ಒದಗಿಸುತ್ತದೆ. ಹಾಗೆ ಸಿಕ್ಕ ಶಕ್ತಿಯಿಂದ ಮತ್ತು ಸತ್ವದಿಂದಲೇ ಇಲ್ಲಿ ಜೀವಿಗಳಿಗೆ ಜೀವನ. ಇಲ್ಲದಿದ್ದರೆ ಇಲ್ಲ.

ನಾವು ಇದನ್ನೆಲ್ಲಾ ಅನುಭವಿಸುತ್ತಾ, ಒಂದಿಷ್ಟೂ ಕೃತಜ್ಞತೆ ಇಲ್ಲದೆ ಇಡೀ ಭೂಮಿಯ ನಾಶಕ್ಕೆ ಎಷ್ಟು, ಏನೇನು ಅವಶ್ಯವೋ ಅದನ್ನೆಲ್ಲ ಸಿದ್ಧಪಡಿಸಿಕೊಂಡು ತನ್ನ ನಾಶಕ್ಕೆ ತಾನೇ ತಯಾರಿ ನಡೆಸಿರುವ ನಾವು ಸತ್ಯವಾಗಲೂ ಸಂಸ್ಕಾರ ವಿಲ್ಲದವರಂತೆ ವರ್ತಿಸುವುದು ಬಹಳ ಖೇದನೀಯ. ನಾವೆಲ್ಲ ಈ ಪ್ರಕೃತಿಗೆ ನಮ್ಮ ಮೇಲಿನ ಪ್ರೀತಿಗೆ ಕೃತಜ್ಞತೆಯನ್ನು ಮಾತ್ರ ತೋರಬೇಕು. ಇದನ್ನು ನಮಿಸಬೇಕು. ಇದನ್ನು ಸಂತೋಷದಿಂದ ಅನುಭವಿಸುತ್ತಾ ಇದನ್ನೆಲ್ಲಾ ಕಾಪಾಡುವ ಪ್ರಯತ್ನ ಮಾಡಬೇಕು.

ರಸಧಾರೆ - 120

ಪಾಕ ನಿನ್ನೊಳದೊಂದು ಸಾಗುತಿಹುಡೆದೆಬಿಡದೆ |

ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ||

ಸಾಕುಬೇಕುಗಳೆಲ್ಲವದರಿನಾ ಯಂತ್ರವನ್ನು |

ಏಕೆ ರಚಿಸಿದನೋ ವಿಧಿ – ಮಂಕುತಿಮ್ಮ. ||

ಪಾಕ ನಿನ್ನೊಳು ಅದು ಒಂದು ಸಾಗುತಿಹುದು ಎಡೆಬಿಡದೆ . ಲೋಕದ ಎಲ್ಲವು ಸೂಕ್ಷ್ಮ ಗತಿಯಿನ ಒಳ ಹೊಕ್ಕು.

ಸಾಕು ಬೇಕುಗಳೆಲ್ಲವ ಅದರಿನಾ ಯಂತ್ರವನ್ನು ಏಕೆ ರಚಿಸಿದನೋ ವಿಧಿ – ಮಂಕುತಿಮ್ಮ

ಒಂದು ಪಾಕ ಸಿದ್ಧವಾಗುವ ರೀತಿಯಲ್ಲಿ ಮನಸ್ಸು ಬುದ್ಧಿಗಳು ದೇಹದೊಡನೆ ಸೇರಿ ನಿನ್ನೊಳು ಸೂಕ್ಷ್ಮಗತಿಯಲ್ಲಿ ಈ ಜಗದ್ವ್ಯಾಪಾರವೇ ನಡೆಯುತ್ತಿದೆ. ಕೆಲವನ್ನು ಬೇಕೆನ್ನುವ ಕೆಲವನ್ನು ಸಾಕೆನ್ನುವ. ಇಂದು ಬೇಡವೆಂದದ್ದನ್ನು ನಾಳೆ ಬೇಕೆನ್ನುವ ಎಂದೋ ಇಷ್ಟಪಟ್ಟದ್ದನ್ನು ಇಂದು ಅಸಹ್ಯಿಸಿಕೊಳ್ಳುವ , ಈ ಮನುಷ್ಯದೇಹದ ಯಂತ್ರವನ್ನು ಹೀಗೇಕೆ ರಚಿಸಿದನೋ ವಿಧಿ ಎಂದು ಒಂದು ಪ್ರಶ್ನೆಯನ್ನು ಹಾಕುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

ನಮ್ಮ ದೇಹದ ಯಂತ್ರ ಬಹಳ ವಿಚಿತ್ರವಾದದದ್ದು. ಇದರೊಳಗೆ ನಿರಂತರ ಕೆಲಸ ನಡೆಯುತ್ತಿರುತ್ತದೆ. ಈ ಲೋಕದ ಎಲ್ಲವಸ್ತುಗಳೂ ನಮ್ಮ ಪರಿಚಯಕ್ಕೆ ಬರುತ್ತದೆ. ಬಂದ ಕೆಲವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಕೆಲವನ್ನು ಇಷ್ಟಪಡುತ್ತೇವೆ. ಕೆಲವನ್ನು ಇಷ್ಟಪಡುವುದಿಲ್ಲ. ಕೆಲವನ್ನು ಕಂಡು ನಾವು ನಿರ್ಲಿಪ್ತರಾಗಿರುತ್ತೇವೆ. ಇಂದು ಇಷ್ಟವಾದ ವಸ್ತು ವಿಷಯ ಮತ್ತು ವ್ಯಕ್ತಿಗಳು ಕಾಲಕಾಲದ ಮೇಲೆ ಇಷ್ಟವಾಗದೆ ಹೋಗುತ್ತದೆ. ಹೊಸ ಹೊಸ ವಿಷಯಗಳು. ನಮ್ಮ ಗಮನಕ್ಕೆ ಬರುವುದೆಲ್ಲವೂ ಅರ್ಥವಾಗುವುದಿಲ್ಲ. ಅರ್ಥವಾದದ್ದೆಲ್ಲವೂ ಇಷ್ಟವಾಗುವುದಿಲ್ಲ. ಇಷ್ಟವಾದದ್ದೆಲ್ಲವೂ ನಮ್ಮದಾಗುವುದಿಲ್ಲ. ನಮ್ಮದಾದದ್ದೆಲ್ಲ್ಲವೂ ನಮ್ಮದಾಗೆ ಉಳಿಯುವುದಿಲ್ಲ. ನಾವು ಇಷ್ಟಪುದುವುದಕ್ಕೆ ಅಥವಾ ಇಷ್ಟಪಡದೆ ಇರುವುದಕ್ಕೆ, ನಮ್ಮದೇ ಆದ ಕಾರಣಗಳಿರಬಹುದು ಅಥವಾ ಕಾರಣವೇ ಇಲ್ಲದಿರಬಹುದು.

ಮನಸ್ಸಿನಲ್ಲಿ ನಡೆಯುವ ಪ್ರತಿ ಪ್ರಕ್ರಿಯೆಯೂ ಬಹಳ ವಿಚಿತ್ರವಾಗಿರುತ್ತದೆ. ಇದರೊಳಗೆ ಏನೇನೂ ಬೇಕಾದ್ದು ಬೇಡದ್ದು ಎಲ್ಲಾ ವಿಚಾರಗಳ ಅಡುಗೆಯ ಪಾಕ ನಡೆಯುತ್ತಲೇ ಇರುತ್ತದೆ. ಇನ್ನು ಹೀಗೆ ಬರುವ, ಮನದಲ್ಲೇ ಉಳಿಯುವ, ಮಂದು ಹೋಗುವ ವಿಚಾರಗಳಿಂದ ದೇಹದ ಮೇಲೆ ಆಗುವ ಪ್ರಭಾವವೂ ಸಹ ಬಹಳ ವಿಚಿತ್ರ. ಅದು ಏಕೆ ಹಾಗೆ ನಡೆಯುತ್ತದೆ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ. ನಮ್ಮ ಮನದಿಂಗಿತ ಪರರಾರಿಗೂ ಅರ್ಥವಾಗುವುದೇ ಇಲ್ಲ. ಪರರ ಮನದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆ ತಿಳಿಯುವುದಿಲ್ಲ. ಇಂತಹ ಒಂದು ಯಂತ್ರವನ್ನು ಏಕೆ ರಚಿಸಿದನೋ ಆ ಬ್ರಹ್ಮ ಎನ್ನುತ್ತಾರೆ ಶ್ರೀ ಗುಂಡಪ್ಪನವರು.

ವಾಚಕರೆ ಇಲ್ಲಿ ನಾವು ನಮ್ಮ ನಮ್ಮೊಳಗೇ ವಿಚಾರಮಾದಬೇಕಾದ ವಿಚಾರವೆನೆಂದರೆ, ಮನಸ್ಸು ಸ್ಥಿಮಿತದಲ್ಲಿ ಇದ್ದರೆ, ನಿರಮಳವಾಗಿದ್ದರೆ ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ ಎಂಬುದು ಸಂಸಿದ್ಧವಾಗಿದೆ. ಹಾಗಾಗಿ ನಾವು ನಮ್ಮ ಮನಸ್ಸುಗಳನ್ನು ಆದಷ್ಟು ನೆಮ್ಮದಿಯಿಂದ ಇಟ್ಟುಕೊಳ್ಳಲು ಪ್ರಯತ್ನಪಡುವ.You may Also Like :
 


Post a Comment

0 Comments

Top Post Ad

Below Post Ad